ಇಂಡೋನೇಷ್ಯ

ಆಗ್ನೇಯ ಏಷ್ಯದ ಕಡಲ ಕರೆಯಿಂದಾಚೆಗೆ ಸಮಭಾಜಕ ವೃತ್ತದ ಮೇಲೆ ಪೂರ್ವ ಪಶ್ಚಿಮವಾಗಿ 135o-90o ಪೂ.ರೇ., ಉತ್ತರ ದಕ್ಷಿಣವಾಗಿ 60, ಉ.ಅ. ದಿಂದ 110 ದ. ಅ. ವರೆಗೆ ಚಾಚಿ ಮಲಗಿರುವ ದ್ವೀಪಸ್ತೋಮ. ಇಂಡೋನೇಷ್ಯ ಗಣರಾಜ್ಯವೆಂದು ಇದರ ಪೂರ್ತಿ ಹೆಸರು. ಈ ಗಣರಾಜ್ಯಕ್ಕೆ ಸೇರಿದಲ್ಲದ ಪ್ರದೇಶಗಳನ್ನೂ ಒಳಗೊಂಡು ಈ ವಲಯದಲ್ಲಿರುವ ಎಲ್ಲ ದ್ವೀಪಗಳ ಸ್ತೋಮವನ್ನು; ಇಂಡೋನೇಷ್ಯವೆಂದು ಕರೆಯುವುದೂ ಉಂಟು. ಸುಮಾತ್ರ, ಜಾವ, ಮಧುರ, ಕಾಲಿಮಾಂಟನ್ (ಇದರ ಮೊದಲಿನ ಹೆಸರು ಬೋರ್ನಿಯೋ), ಸುಲವೇಶಿ ನೂಸಾತೆಂಗರ, ಮಲುಕು (ಮಲಕ್ಕ), ನ್ಯೂಗಿನಿಯ ಪಶ್ಚಿಮಭಾಗ (ಇರಿಯನ್ ಭಾರತ್) ಹಾಗೂ ಮೂರು ಸಾವಿರ ಸಣ್ಣಪುಟ್ಟ ದ್ವೀಪಗಳು ಇಂಡೋನೇಷ್ಯ ಗಣರಾಜ್ಯಕ್ಕೆ ಸೇರಿವೆ. ವಿಸ್ತೀರ್ಣ 19 ಲಕ್ಷ ಚ.ಕಿ.ಮೀ. (575,654 ಚ.ಮೈ.) ಉತ್ತರಕ್ಕೆ ದಕ್ಷಿಣ ಚೀನ ಸಮುದ್ರವೂ ಉತ್ತರ ಮತ್ತು ಪೂರ್ವಕ್ಕೆ ಪೆಸಿಫಿಕ್ ಸಾಗರವೂ ದಕ್ಷಿಣ ಮತ್ತು ಪಶ್ಚಿಮಕ್ಕೆ ಹಿಂದೂ ಸಾಗರವೂ ಇವೆ. ಜಾವಾದಲ್ಲಿ ವಾಸಿಸುವ ಜನರನ್ನು ಜಾವನೀಸರೆಂದೂ ಬಾಲಿ ದ್ವೀಪದಲ್ಲಿರುವವರನ್ನು ಬಾಲಿನೀಸರೆಂದೂ ಪಶ್ಚಿಮ ಜಾವಾದಲ್ಲಿರುವವರನ್ನು ಸುಂಡನೀಸರೆಂದೂ ಪೂರ್ವ ಜಾವಾದಲ್ಲಿರುವವರನ್ನು ಮಧುರೀಸರೆಂದೂ ಸುಮಾತ್ರದಲ್ಲಿರುವವರನ್ನು ಅಟ್ಟೆ, ಬಟಕ್ ಮತ್ತು ವಿನಂಗ್‍ಕಬರ್ ಎಂದೂ ಇರಿಯನ್ ಭಾರತದಲ್ಲಿರುವವರನ್ನು ಮಲುಕು ಎಂದೂ ಕರೆಯುತ್ತಾರೆ. ಇವರಲ್ಲದೆ ಚೀನದೇಶದವರು ಅರಬ್ಬರು ಮತ್ತು 1602-1949ರಲ್ಲಿ ಇಂಡೋನೇಷ್ಯವನ್ನಾಳಿದ ಡಚ್ ನೆಲೆಸಿಗರ ಪೈಕಿ ಅಲ್ಪ ಸ್ವಲ್ಪ ಜನರೂ ಇಲ್ಲಿದ್ದಾರೆ. ಈ ಮಧ್ಯೆ 1942-1945ರಲ್ಲಿ ಜಪಾನ್ ದೇಶದವರು ಇಲ್ಲಿ ನೆಲೆಸಿದ್ದರು. 1966ರ ಜನಗಣತಿಯ ಪ್ರಕಾರ ಇಂಡೋನೇಷ್ಯದ ಜನಸಂಖ್ಯೆ 10,90,00,000 ಇದ್ದು ಇದರಲ್ಲಿ 50% ಜಾವಾ ದ್ವೀಪವೊಂದರಲ್ಲೆ ಕೇಂದ್ರಿಕೃತವಾಗಿತ್ತು. ರಾಜಧಾನಿಯಾದ ಜಕಾರ್ತದ ಜನಸಂಖ್ಯೆ 1961ರಲ್ಲಿ ಸುಮಾರು 40,00,000 ಇತ್ತು. (36,94,343 ಎಂದು ಮೊದಲು ಲೆಕ್ಕಹಾಕಲಾಗಿತ್ತು).
	
ಮೇಲ್ಮೈ ಲಕ್ಷಣ : ಇಂಡೋನೇಷ್ಯ ದ್ವೀಪಗಳು ಮತ್ತು ಪಟ್ಟಣಗಳ ಉತ್ಪನ್ನಗಳು ಆ ದೇಶಗಳ ಪ್ರಾಕೃತಿಕ ಸಂಪತ್ತನ್ನು ಪ್ರತಿಬಿಂಬಿಸುತ್ತವೆ. ಸಮುದ್ರ ತೀರ ಮತ್ತು ದರ ಹತ್ತಿರದ ತಗ್ಗು ಪ್ರದೇಶಗಳಿಂದ ಪರ್ವತಶ್ರೇಣಿಗೆ ಎತ್ತರ ಕ್ರಮೇಣ ಹೆಚ್ಚುತ್ತ ಹೋಗಿದೆ. ಇಂಡೊನೇಷ್ಯದ ಅಗ್ನಿ ಪರ್ವತಗಳು, ಅದರಲ್ಲೂ ಮುಖ್ಯವಾಗಿ ಬಾಲಿ ಅಗ್ನಿಪರ್ವತಗಳು; ಪ್ರಪಂಚದಲ್ಲೇ ಹೆಸರುವಾಸಿಯಾಗಿವೆ. ಈ ಅಗ್ನಿಪರ್ವತಗಳಲ್ಲಿ ಗುನಂಗ್ ಅಗಂಗ್ (19,473') ಗುನಂಗ್ ಬಟುಕ್ (5,723'), ಗುನಂಗ್ ಕೌ (7,893'), ಗುನಂಗ್ ಬಕುಂಗನ್ (5,000') ಮುಂತಾದ ಹೆಸರಾಂತ ಶಿಖರಗಳಿವೆ ಬಾಲಿ ದ್ವೀಪದಲ್ಲಿ ಉತ್ತರದ ತೀರಪ್ರದೇಶ ಹೆಚ್ಚಾಗಿ ಸಾಗುವಳಿಗೊಳಗಾಗಿರುವ ದಕ್ಷಿಣದ ತೀರಪ್ರದೇಶಕ್ಕಿಂತಲೂ ಕಿರಿದಾಗಿದೆ. ಅಲ್ಲದೆ ಜಾವಾ ಮತ್ತು ಲೊಂಬೋಕ್ನಲ್ಲಿ ಸಮೇರುಶಿಖರದಂಥ (12,286') ಅನೇಕ ಶಿಖರಗಳಿವೆ. ಅಗ್ನಿಪರ್ವತದ ಅಪಾಯದ ಮುನ್ಸೂಚನೆ ಗೊತ್ತಾದಕೂಡಲೆ ಸುತ್ತಮುತ್ತಲ ಪ್ರದೇಶವನ್ನೆಲ್ಲ ತೆರವು ಮಾಡಿ ಆ ಪ್ರದೇಶಕ್ಕೆ ಯಾರೂ ಪ್ರವೇಶಿಸದಂತೆ ಕ್ರಮ ಕೈಕೊಳ್ಳಲಾಗುತ್ತದೆ. ಜಾವಾ, ಬಾಲಿ ಮತ್ತು ಲೊಂಬೋಕ್‍ಗಳಲ್ಲಿ ದಟ್ಟವಾದ ಚೌಗು ಅರಣ್ಯಗಳೂ ವ್ಯವಸಾಯಕ್ಕೆ ಯೋಗ್ಯವಾದ ಪರ್ವತದ ಇಳಿಜಾರು ಪ್ರದೇಶಗಳೂ ಕಂಡುಬರುತ್ತವೆ. ಕಾಲಿಮಾಂಟನಿನಲ್ಲಿ ದಟ್ಟವಾದ ಚೌಗು ಅರಣ್ಯಗಳು ಅಧಿಕ. ಸುಮಾತ್ರದ ಮೇಲ್ಮೈಲಕ್ಷಣದ ಆಧಾರದ ಮೇಲೆ ಅದನ್ನು ಪೂರ್ವ ಪಶ್ಚಿಮ ಮಧ್ಯ ಸುಮಾತ್ರವೆಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಇವು ಸಂಪರ್ಕ ವ್ಯವಸ್ಥೆಗೆ ಅಸಂಖ್ಯಾತ ಸಮಸ್ಯೆಗಳನ್ನು ತಂದೊಡ್ಡಿವೆ. ಇದರಿಂದ ಸುಮಾತ್ರದ ಈ ಮೂರು ಭಾಗಗಳಲ್ಲೂ ರೈಲು ಸಂಚಾರ ಸೌಕರ್ಯವಿದ್ದರೂ ಪರ್ವತಗಳು ಮತ್ತು ಕಮರಿಗಳಿರುವುದರಿಂದ ಈ ಭಾಗಗಳ ಪರಸ್ಪರ ಸಂಪರ್ಕವ್ಯವಸ್ಥೆ ಆರ್ಥಿಕ ದೃಷ್ಟಿಯಿಂದ ಸಾಧ್ಯವಾಗಿಲ್ಲ. ಸುಮಾತ್ರದ ಸಮುದ್ರತೀರ ಪ್ರದೇಶದ ಸುತ್ತ ಉಸುಬು ನೆಲ ಮತ್ತು ಪ್ರವಾಹದಿಂದಾದ ಭೂಮಿಯಿದೆ; ಒಳನಾಡಿನಲ್ಲಿ ಮೆಟ್ಟಲು ದಿಬ್ಬಗಳನ್ನೊಳಗೊಂಡ ಫಲವತ್ತಾದ ಪ್ರದೇಶವಿದೆ. ಸುಲವೇಶಿಯಲ್ಲಿ ಪರ್ವತಗಳು ಹೆಚ್ಚು.
	
ವಾಯುಗುಣ : ಇಂಡೋನೇಷ್ಯದ್ದು ಅಧಿಕ ಮಳೆ, ಆದ್ರ್ರತೆ ಮತ್ತು ಉಷ್ಣತೆ ಇರುವ ಉಷ್ಣವಲಯದ ವಾಯುಗುಣ. ನವೆಂಬರ್‍ನಿಂದ ಮಾರ್ಚ್ ತಿಂಗಳಿನವರೆಗೆ ಮಳೆಗಾಲ, ಮುಂದೆ ಮಳೆ ಕ್ರಮೇಣ ಕಡಿಮೆಯಾಗಿ ಜೂನ್‍ನಿಂದ ಅಕ್ಟೋಬರ್ ವರೆಗೆ ಒಣಹವೆಯಿರುತ್ತದೆ. ಬೇಸಗೆಯಲ್ಲಿ ಸೆಕೆ ವಿಪರೀತ. ಇಂಡೋನೇಷ್ಯದಲ್ಲಿ ಮುಂಗಾರಿನ ಪ್ರಭಾವ ಹೆಚ್ಚು. ತಗ್ಗು ಪ್ರದೇಶಗಳಲ್ಲಿ ಬರುವ ಮಳೆಯ ವಾರ್ಷಿಕ ಪ್ರಮಾಣ ಸರಾಸರಿ 70"-125" ಗಳಷ್ಟಿದ್ದು ಕೆಲವು ಪರ್ವತ ಪ್ರದೇಶಗಳಲ್ಲಿ 240"ಗಳಷ್ಟು ಹೆಚ್ಚಾಗುತ್ತದೆ. ಸುಮಾತ್ರದ ತಗ್ಗು ಪ್ರದೇಶಗಳಲ್ಲಿ ಮಳೆ ಸಾಮಾನ್ಯವಾಗಿ 120"-144" ಗಳವರೆಗಿದ್ದು ದಕ್ಷಿಣಕ್ಕೆ ಬಂದಂತೆ ಈ ಪ್ರಮಾಣ ಕಡಿಮೆಯಾಗುತ್ತದೆ. ದಕ್ಷಿಣ ಭಾಗದಲ್ಲಿ ಆಸ್ಟ್ರೇಲಿಯ ಮರುಭೂಮಿಯ ಪರಿಣಾಮ ಕಂಡುಬರುತ್ತದೆ. ಇಂಡೊನೇಷ್ಯದ ಸರಾಸರಿ ತೇವಾಂಶ 82%. ಇಂಡೊನೇಷ್ಯ ತೀರದ ಉಷ್ಣತೆಯನ್ನು ಋತುಗಳಿಗಿಂತಲೂ ಆ ಭಾಗದ ಎತ್ತರವೇ ಬಹಳಮಟ್ಟಿಗೆ ನಿರ್ಣಯಿಸುತ್ತದೆ. ವರ್ಷದ ಸರಾಸರಿ ಉಷ್ಣತೆ ಸುಮಾರು 770-810 ಫ್ಯಾ. ದಿನಂಪ್ರತಿ ಉಷ್ಣತೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಒಳಭಾಗದಲ್ಲಿ ಅತ್ಯಧಿಕ ಉಷ್ಣತೆ ಎತ್ತರಭಾಗದಲ್ಲಿ ಕಡಿಮೆ. ಜಕಾರ್ತದಲ್ಲಿ ವರ್ಷದ ಸರಾಸರಿ ಉಷ್ಣತೆ 780 ; ಮಳೆಯ ಸರಾಸರಿ ಪ್ರಮಾಣ 8ಂ".
	
ಬೆಳೆ, ಖನಿಜ, ಕೈಗಾರಿಕೆ : ಇಂಡೊನೇಷ್ಯದ ಪ್ರತಿಯೊಂದು ದ್ವೀಪವೂ ಯಾವುದಾದರೊಂದು ವಿಷಯದಲ್ಲಿ ಪ್ರಸಿದ್ಧಿ ಪಡೆದಿದೆ ; ದೇಶದ ಸಂಪತ್‍ಸಮೃದ್ಧಿಗೆ ನೆರವು ನೀಡಿದೆ ; ದಕ್ಷಿಣ ಸುಮಾತ್ರ ಚಿನ್ನಕ್ಕೆ ಹೆಸರಾಗಿದೆ. ರೆಡ್‍ಜಂಗಲ್‍ಬಾಂಗ್‍ನ ಸುತ್ತಲೂ ಸೀಸದ ಅದುರುಗಳಿವೆ. ಪಂಕಂಬಾರು ಮತ್ತು ಪಲೆಂಬಾಂಗ್‍ನಲ್ಲಿ ಪೆಟ್ರೋಲ್ ಸಿಗುತ್ತದೆ. ಬಂಕಾ ದ್ವೀಪಗಳಲ್ಲಿ ಸಂಪದ್ಯುಕ್ತವಾದ ಅರಣ್ಯವಿದೆ. ಇಲ್ಲಿ ರಬ್ಬರು, ಕೋಕೊ, ಕಾಫಿ ಅಧಿಕ ಪ್ರಮಾಣದಲ್ಲಿ ದೊರಕುತ್ತವೆ. ಪಲೆಂಬಾಂಗ್ ಪ್ರದೇಶದಲ್ಲಿ ಅನಾನಸ್ ಬೆಳೆಯುತ್ತದೆ. ಜಾವಾ ದ್ವೀಪದಲ್ಲಿರುವ ಜಕಾರ್ತ ನೂಲಿನ ಬಟ್ಟೆಗಳಿಗೂ ಮೋಟಾರು ಸೈಕಲ್ಲುಗಳಿಗೂ ಹೆಸರುವಾಸಿ. ಬೊಬೋರ್ ಟೈರು ಕಾರ್ಖಾನೆಯನ್ನಲ್ಲದೆ ವಿe್ಞÁನ ಸಸ್ಯೋದ್ಯಾನವೊಂದನ್ನು ಹೊಂದಿದೆ. ಜಿಲಟ್ಟ ಜಾಪ್ ಎಂಬುದು ಮೀನಿನ ಉತ್ಪನ್ನಗಳಿಗೂ ಕೈಕಸುಬುಗಳಿಗೂ ಕೈಮಗ್ಗ ಹಾಗೂ ಹತ್ತಿ ಕೈಗಾರಿಕೆಗಳಿಗೂ ಪ್ರಸಿದ್ಧ. ಇಂಡೊನೇಷ್ಯದ ಸ್ತ್ರೀಯರ ರಾಷ್ಟ್ರೀಯ ಉಡುಗೆ ಬಾಟುಕ್ ಎಂಬುದರ ತಯಾರಿಕೆಗೆ ಇದು ಹೆಸರು ಪಡೆದಿದೆ. ಈ ಉಡುಪು ಭಾರತದ ಸೀರೆಯನ್ನೆ ಬಹುಮಟ್ಟಿಗೆ ಹೋಲುತ್ತದೆ. ಇಲ್ಲಿ ಹಣ್ಣು ತರಕಾರಿಗಳನ್ನೂ ಹೆಚ್ಚಾಗಿ ಬೆಳೆಯುತ್ತಾರೆ. ಗಾಜಿನ ಕಾರ್ಖಾನೆಯೂ ಇದೆ. ಮಧುರದಲ್ಲಿರುವ ಪಾಮೆಕಾಸನ್ ಧಾನ್ಯಕ್ಕೆ ಹೆಸರು ಪಡೆದಿದೆ. ಮಧ್ಯ ಜಾವಾದಲ್ಲಿ ಬಾಳೆಯ ಗಿಡಗಳು ಹೆಚ್ಚು. ಜಕಾರ್ತ (ಜೋಗ್ಯಕಾರ್ತ) ದಲ್ಲಿ ನಡೆಯುವ ಬೆಳ್ಳಿಯ ಕೆಲಸ ಬಹಳ ಪ್ರಸಿದ್ಧ.
	
ನುಸಾತೆಂಗರ ದ್ವೀಪಸ್ತೋಮಕ್ಕೆ ಸೇರಿದ ಬಾಲಿದ್ವೀಪದ ಸಿಂಗರಡ್ಜ ಕುಶಲ ಕೈಗಾರಿಕೆಗೆ ಹೆಸರುವಾಸಿಯಾಗಿದ್ದು ಇಂಡೋನೇಷ್ಯಕ್ಕೆ ವಿದೇಶಿ ವಿನಿಮಯವನ್ನು ಹೆಚ್ಚಾಗಿ ಒದಗಿಸುತ್ತದೆ. ಬಾಲಿಯ ದೊಡ್ಡನಗರವಾದ ಡೆಪಸರ್‍ನಲ್ಲಿ ಹಿತಕರ ವಾಯುಗುಣ, ಮನಮೋಹಕ ನೈಸರ್ಗಿಕ ಸೌಂದರ್ಯ ಇರುವುದರಿಂದ ಇದು ಅಸಂಖ್ಯಾತ ಪ್ರವಾಸಿಗರನ್ನು ಸೆಳೆಯುತ್ತಿದೆ. ಲೊಂಬೋಕಿನ ರಾಜಧಾನಿಯಾದ ಮಟರಾಮ್ ಗೋಮಾಂಸ ಮತ್ತು ದನಕರುಗಳಿಗೆ ಪ್ರಸಿದ್ಧ, ಬೀಮ, ಎಂಡೆಹ್, ಸುಂಬ ಮತ್ತು ಇತರ ದ್ವೀಪಗಳು ಗೋಮಾಂಸವನ್ನು ಉತ್ಪಾದಿಸುತ್ತವೆ. ಇದನ್ನು ಹಾಂಕಾಂಗ್ ಮತ್ತು ಆಗ್ನೇಯ ಏಷ್ಯ ದೇಶಗಳಿಗೆ ರಪ್ತು ಮಾಡುತ್ತಾರೆ. ತಿಮೂರ್ ಒಣಹವೆಯ ಪಟ್ಟಣ. ಮೆದುಬಂಡೆಗಳಿಂದ ಕೂಡಿದ ಇಲ್ಲಿ ಉಷ್ಣವಲಯದ ಮಳೆಯ ಕಾಡುಗಳು ಯಥೇಚ್ಛ. ಇಲ್ಲಿ ಕೆಲಮಟ್ಟಿಗೆ ದನಕರುಗಳನ್ನು ಸಾಕುತ್ತಾರೆ. ಸುಂಬದಲ್ಲಿ ಕಮೊಡೊ ಎಂಬ ಒಂದು ಕಶೇರುಕ ಪ್ರಾಣಿ ಕಂಡುಬರುತ್ತದೆ. (ನೋಡಿ- ಕಮೋಡೋ) ಹಲ್ಲಿಯಂತಿರುವ ಈ ಪ್ರಾಣಿ ಪ್ರಪಂಚದ ಉಳಿದೆಡೆಗಳಲ್ಲಿ ವಿರಳ. ನುಸಾತೆಂಗರದ ಸುಂಬ ಮತ್ತು ಸಂಭಾಪಾಗಳಲ್ಲಿ ಕ್ರೀಡೆಗಳೂ ಮತ್ತು ರಪ್ತು ಮಾಡುವುದಕ್ಕೂ ಕುದುರೆಗಳನ್ನು ಸಾಕುತ್ತಾರೆ.
	
ಕಾಲಿಮಾಂಟನ್ ಮತ್ತು ಸಿಂಗಪುರಗಳ ನಡುವೆ ಇರುವ ಆಳವಾದ ಕರಿಮಾತ ಜಲಸಂಧಿ ಮೀನು ಹಿಡಿಯುವುದಕ್ಕೆ ಯೋಗ್ಯ. ಪಾಂಟಿಯನಾಕಿ ರಬ್ಬರ್ ಮತ್ತು ಅರಣ್ಯಗಳಿಗೂ ಬಾಲಿಕ್ ಪಾಪನ್ ಪೆಟ್ರೋಲಿಗೂ ಸಮವಿಂಡ ಹತ್ತಿ ಜವಳಿಗೂ ತಾರಕನ್ ಪೆಟ್ರೋಲಿಗೂ ಬಂಜಾರ್ ಮಾಸಿನ್ ಮೀನಿಗೂ ಮಾರ್ತಾಪುರ ಆಭರಣಗಳಿಗೂ ಪ್ರಸಿದ್ಧ. ಕಾಲಿಮಾಂಟನ್ ಮತ್ತು ಸುಲವೇಶಿಗಳ ನಡುವೆ ಇರುವ ಆಳವಾದ ಜಲಸಂಧಿ ಮೀನು ಹಿಡಿಯಲು ಯೋಗ್ಯ ; ಕಾಲಿಮಾಂಟನ್ ಅರಣ್ಯದ ಮರವನ್ನು ಜಪಾನಿಗೆ ರಪ್ತು ಮಾಡುತ್ತಾರೆ.
	
ಸುಲವೇಶಿ ದ್ವೀಪದಲ್ಲಿರುವ ಗೊರೊಂಟಲೊ ರಬ್ಬರಿಗೂ ಪೊಸೊ ಆಳ ಸಮುದ್ರದ ಮೀನುಗಾರಿಕೆಗೂ ಕೆಂಡಲ್ ಉಪ್ಪು ಮೀನಿಗೂ ಪ್ರಸಿದ್ಧ. ಪಿಂಡಾಂಗ್‍ನಲ್ಲಿ ಉಪ್ಪು ಮೀನುಗಳ ಸಂರಕ್ಷಣಾ ಸಂಸ್ಕರಣಾಲಯವಿದೆ. ಮಕಾಸರ್ ಕೈಮಗ್ಗ ಮತ್ತು ಗೃಹ ಕೈಗಾರಿಕೆಗಳಿಗೂ ಕೊಬ್ಬರಿಯ ಉತ್ಪನ್ನಕ್ಕೂ ಪ್ರಸಿದ್ಧ ಪಡೆದಿದೆ. ಸುಲವೇಶಿಯಲ್ಲಿರುವ ಪಲೋಪೊ ಶುಷ್ಕಪ್ರದೇಶ. ಮಲುಕು, ಬುರು, ಸೆರಾನ್, ಅಂಬನ್ ಮತ್ತು ಬಂಡ ದ್ವೀಪಗಳು ಮುತ್ತುಗಳಿಗೆ ಪ್ರಸಿದ್ಧ.
	
ಇಂಡೋನೇಷ್ಯದಲ್ಲಿ ಇಷ್ಟೆಲ್ಲ ಇದ್ದರೂ ಶಾಂತಿ ನೆಮ್ಮದಿಗಳ ದೃಷ್ಟಿಯಿಂದ ಇಲ್ಲಿ ಅನೇಕ ಸಮಸ್ಯೆಗಳಿವೆ. ಜಗತ್ತಿನ ಹಲವು ರಾಷ್ಟ್ರಗಳೊಂದಿಗೆ ಹೋಲಿಸಿದರೆ ಇಂಡೋನೇಷ್ಯದಲ್ಲಿ ಮಿತಿಮೀರಿದ ಜನಸಂಖ್ಯೆಯಿದೆ. ಮಧ್ಯದಲ್ಲಿನ ಜಾವಾ ದ್ವೀಪದಲ್ಲಂತೂ ಅತ್ಯಧಿಕ. ಉದ್ದಕ್ಕೂ ಹರಡಿಕೊಂಡಿರುವ ಈ ಬೃಹತ್ತಾದ ದ್ವೀಪ ಸಮುದಾಯಗಳ ಆಡಳಿತ ಸುಲಭವಲ್ಲ. ಕಾಲಿಮಾಂಟನ್ನಿನ ಉತ್ತರಕ್ಕಿರುವ ಸಲಾ ಎಂಬುದು ಮಲೇಷ್ಯ ಮತ್ತು ಫಿಲಿಪೈನ್ಸ್ ನಡುವಿನ ಬಡಿದಾಟಕ್ಕೆ ಕಾರಣ. ಸುಮಾತ್ರದ ಪಶ್ಚಿಮಕ್ಕಿರುವ ಮಲೇಷ್ಯಕ್ಕೆ ನೆಲದ ಹಸಿವು ಬಹಳ. ತಿಮುರ್ ದ್ವೀಪದಲ್ಲಿ ಪೋರ್ಚುಗೀಸರಿಗೂ ಪಾಲುಂಟು. ಇಂಡೋನೇಷ್ಯಕ್ಕೆ ಸೇರಿದ ಇರಿಯನ್ ಭಾರತದ ಮಗ್ಗುಲಲ್ಲಿ ಆಸ್ಟ್ರೇಲಿಯದ ಪ್ರದೇಶವಿದೆ. ಮಲುಕು ದ್ವೀಪಗಳಲ್ಲಿ ಡಚ್ಚರ ಪ್ರಭಾವ ಕಡಿಮೆಯಾಗಿದ್ದರೂ ಇನ್ನೂ ಪೂರ್ತಿ ಅಳಿಸಿಲ್ಲ. ಅನಾಹುತವನ್ನೆಸಗುವ ಜ್ವಾಲಾಮುಖಿಗಳ ಭಯವಂತೂ ನಿತ್ಯದ ವಿಷಯ. ಇದೂ ಅಲ್ಲದೆ ಇಲ್ಲಿನ ಜನ ನಾನಾ ಬುಡಕಟ್ಟಿನವರು. ನಾನಾ ಮತೀಯರು. ರಾಜಕೀಯದಲ್ಲಿ ನಾನಾ ಹಿತಾಸಕ್ತಿಗಳ ಘರ್ಷಣೆ ಇದ್ದೇ ಇದೆ. 1948ರ ಸೆಪ್ಟಂಬರ್ 20ರಂದು ಜನ್ಮತಾಳಿದ ಇಂಡೋನೇಷ್ಯ ಗಣರಾಜ್ಯ ಉದ್ದಕ್ಕೂ ಹಲವಾರು ಗಂಡಾಂತರಗಳನ್ನು ಎದುರಿಸಬೇಕಾಗಿ ಬಂದಿರುವುದಕ್ಕೆ ಇವು ಮುಖ್ಯ ಕಾರಣಗಳು.
	
ಇಂಡೋನೇಷ್ಯದ ವ್ಯವಸಾಯ ಉತ್ತಮ ರೀತಿಯಾಗಿದೆ. 1957ರಲ್ಲಿ 18,18,900 ಹೆಕ್ಟೇರುಗಳನ್ನೊಳಗೊಂಡ 1,195 ಎಸ್ಟೇಟುಗಳಲ್ಲಿ ಭೂಮಿ ಸಾಗುವಳಿಯಾಗುತ್ತಿತ್ತು. 1968ರಲ್ಲಿ 98 ಲಕ್ಷ ಟನ್ನುಗಳಷ್ಟು ಅಕ್ಕಿ ಉತ್ಪತ್ತಿಯಾಯಿತು. ಹಿಂದಿನ ವರ್ಷಗಳಿಗಿಂತ 9.2 ಹೆಚ್ಚಳ ಕಂಡು ಬಂತು. 1963ರಲ್ಲಿ 6,58,000 ಮೆಟ್ರಿಕ್ ಟನ್ನುಗಳಷ್ಟು ಸಕ್ಕರೆಯೂ 92,00,000 ಟನ್ ಅಕ್ಕಿಯೂ 39,000 ಟನ್ ಚಹವೂ (1961ರಲ್ಲಿ) 90,000 ಟನ್ ಕಾಫಿಯೂ 32,00,000 ಟನ್ ಮುಸುಕಿನ ಜೋಳವೂ 3,25,000 ಟನ್ ತಾಳೆಯ ತಿರುಳೂ 1,48,000 ಟನ್ ತಾಳೆಯೆಣ್ಣೆಯೂ (1961ರಲ್ಲಿ) 3,50,000 ಟನ್ ನೆಲಗಡಲೆಯೂ (1962ರಲ್ಲಿ) 90,000 ಟನ್ ಕೊಬ್ಬರಿಯೂ 5,73,000 ಟನ್ ರಬ್ಬರೂ (1962ರಲ್ಲಿ) 1,03,00,000 ಟನ್ ಮರಗೆಣಸೂ (1962ರಲ್ಲಿ) 24,00,000 ಟನ್ ಗೆಣಸೂ (1960ರಲ್ಲಿ) 4,73,000 ಟನ್ ಸೋಯ ಬೀನ್ಸೂ (1962ರಲ್ಲಿ) 7,000 ಮೆ.ಟ. ಹೊಗೆಸೊಪ್ಪೂ ಉತ್ಪನ್ನವಾದುವು. ಇವಲ್ಲದೆ (1961ರಲ್ಲಿ) 1,000 ಪ್ರಾಣಿಗಳನ್ನೂ 5,715 ದನಗಳನ್ನೂ 2,792 ಎಮ್ಮೆಗಳನ್ನೂ 692 ಕುದುರೆಗಳನ್ನೂ 10,623 ಕುರಿ ಮೇಕೆಗಳನ್ನೂ 2,180 ಹಂದಿಗಳನ್ನು ಅಲ್ಲಿನ ಉತ್ಪನ್ನದಲ್ಲಿ ಸೇರಿಸಬಹುದು. ಉಪ್ಪಿನ ತಯಾರಿಕೆಯನ್ನು ಸರ್ಕಾರವೇ ವಹಿಸಿಕೊಂಡಿದೆ. 1961ರಲ್ಲಿ ತಯಾರಾದ ಉಪ್ಪಿನ ಪ್ರಮಾಣ 2,00,000 ಚಿಕ್ಕ ಟನ್ನುಗಳು.
	
ಇಂಡೋನೇಷ್ಯದ ಅರಣ್ಯೋತ್ಪಾದನೆ ಹೀಗಿದೆ (1961ರಲ್ಲಿ ಇದ್ದಂತೆ) : ಮರದ ದಿಮ್ಮಿ ಮತ್ತು ಕೊಯ್ದ ಮರಗಳು 20,40,000 ಘ. ಮೀ., ಸೌದೆ 17,06,000 ಘ. ಮೀ., ಇದ್ದಲು 3,80,000 ಮೆ. ಟನ್ನು.
	
ಗಣಿಗಳಿಂದ ಉತ್ಪಾದನೆಯಾದ ತವರದ ಪ್ರಮಾಣ 1967ರ ಮೇ ನಲ್ಲಿ 1,134 ದೊಡ್ಡ ಟನ್ನುಗಳಷ್ಟಿದ್ದು, 1968ನೇ ಮೇ ತಿಂಗಳಿನಲ್ಲಿ 1,356.99 ದೊಡ್ಡ ಟನ್ನುಗಳಿಗೆ ಏರಿತು. 1968 ಜನವರಿಯಿಂದ ಮೇ ತಿಂಗಳಿನವರೆಗೆ ಉತ್ಪತ್ತಿಯಾದ ತವರದ ಒಟ್ಟು ಪ್ರಮಾಣ 6096.69 ಟನ್ನು. 1966ರಲ್ಲಿ (12 ತಿಂಗಳುಗಳಲ್ಲಿ) 12,526 ಟನ್ ಉತ್ಪಾದನೆಯಾಯಿತು. 1967ರಲ್ಲಿ ಇದು 13,597 ಟನ್ನುಗಳಿಗೆ ಏರಿತು. 1963ರಲ್ಲಿ ಬಾಕ್ಸೈಟಿನ ಉತ್ಪನ್ನ 4,85,000 ದೊಡ್ಡ ಟನ್ನು ಇದ್ದಲು 5,00,000 ಟನ್ನು. 1959ರಲ್ಲಿ ಉತ್ಪಾದನೆಯಾದ ಪೆಟ್ರೋಲಿನ ಪ್ರಮಾಣ 150 ಲಕ್ಷ ಮೆಟ್ರಿಕ್ ಟನ್ನುಗಳಷ್ಟಿದ್ದು 1962ರ ಹೊತ್ತಿಗೆ 270 ಲಕ್ಷ ಟನ್ನುಗಳಿಗೆ ಏರಿತು.
	
ಸಂಪರ್ಕ ಸಾಧನೆ : ಸರಪಣಿಯ ಕೊಂಡಿಗಳಂತೆ ಹಬ್ಬಿರುವ ಇಂಡೋನೇಷ್ಯ ದ್ವೀಪಗಳ ವಿವಿಧ ಪ್ರದೇಶಗಳಿಗೆ ಹಡಗು ಮತ್ತು ವಿಮಾನಗಳೇ ಮುಖ್ಯ ಸಂಪರ್ಕ ಸಾಧನಗಳು. ದೊಡ್ಡ ದೊಡ್ಡ ದ್ವೀಪಗಳಲ್ಲಿ ರಸ್ತೆ ಮತ್ತು ರೈಲು ಸೌಕರ್ಯಗಳನ್ನು ಒದಗಿಸಲಾಗಿದೆ. 1960ರಲ್ಲಿ 81,000 ಕಿ. ಮೀ. ರಸ್ತೆಗಳೂ 6640 ಕಿ. ಮೀ ರೈಲು ಮಾರ್ಗಗಳೂ ಇದ್ದುವು. ಪ್ರವಾಸಿಗಳೂ ಸೇರಿ ಒಟ್ಟು 14,40,00,000 ಜನ ಪ್ರಯಾಣ ಮಾಡಿದರು.
	
ನಾಣ್ಯ ವ್ಯವಸ್ಥೆ : ರುಪೈಯ ಎಂಬುದು ಇಂಡೋನೇಷ್ಯದ ನಾಣ್ಯ. ಇದನ್ನು 100 ಸೆನ್‍ಗಳಾಗಿ ವಿಭಾಗಿಸಲಾಗಿದೆ. 1, 2ಳಿ, 5, 10, 25, 50 ಮತ್ತು 100 ರುಪೈಯ ನೋಟುಗಳಿವೆ.
	
ಮತಗಳು : ಇಂಡೋನೇಷ್ಯದ ಬಾಲಿ ದ್ವೀಪಗಳಲ್ಲಿ ಹಿಂದೂಗಳು ಹೆಚ್ಚಾಗಿದ್ದಾರೆ. ಇಡೀ ಇಂಡೋನೇಷ್ಯದಲ್ಲಿ ಮುಸ್ಲಿಮರು ಬಹುಸಂಖ್ಯಾತರು. ಪಾಶ್ಚಾತ್ಯ ಪ್ರಭಾವದಿಂದ ಕ್ರಿಶ್ಚಿಯನ್ನರೂ ತಕ್ಕಮಟ್ಟಿನ ಸಂಖ್ಯೆಯಲ್ಲಿದ್ದಾರೆ. ನುಸಾತೆಂಗರ ದ್ವೀಪಗಳಲ್ಲೂ ಕಾಲಿಮಾಂಟನ್ನಿನ ಚೀನಿ ಬಹುಸಂಖ್ಯಾತ ಪ್ರದೇಶಗಳಲ್ಲೂ ಬೌದ್ಧರಿದ್ದಾರೆ. ಜಾವ ಮತ್ತು ಸುಮಾತ್ರದಲ್ಲಿ ಮುಸ್ಲಿಮರೇ ಹೆಚ್ಚು. 									 	 		  	
   
(ಇ.ಎ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ